ಭೋಸ್ಲೆ -
	ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳು ನಾಡುಗಳಲ್ಲಿ ರಾಜ್ಯವಾಳಿದ ಒಂದು ರಾಜವಂಶ. ಮರಾಠ ಸಾಮ್ರಾಜ್ಯ ಸ್ಥಾಪಕ ಶಿವಾಜಿ ಈ ವಂಶಕ್ಕೆ ಸೇರಿದವ. ಮೂಲತಃ ರಾಜಸ್ಥಾನದ ಸಿಸೋದಿಯಾ ಮನೆತನಕ್ಕೆ ಈ ವಂಶ ಸೇರಿದುದೆಂದು ಹೇಳುವರು. ಕ್ರಿ.ಶ.1303ರ ಚಿತ್ತೋಡಗಡದ ಮುತ್ತಿಗೆಯಲ್ಲಿ ರಾಣಾ ಲಕ್ಷ್ಮಣ ಸಿಂಹ ಮರಣಹೊಂದಿದ. ಇವನ ಮೊಮ್ಮಗ ಸಜ್ಜನಸಿಂಹ ದಕ್ಷಿಣಕ್ಕೆ ಹೋಗಿ ಬಹಮನೀ ಅರಸರಲ್ಲಿ ಕೆಲಸಕ್ಕೆ ನಿಂತು ದೇವಗಿರಿ ಪ್ರಾಂತದಲ್ಲಿ ಒಂದು ಜಹಗೀರನ್ನು ಸಂಪಾದಿಸಿದ. ಈತನ ಮೊಮ್ಮಗ ಬೈರೋಜಿ ಮುಧೋಳದ ಸುತ್ತುಮುತ್ತಲಿನ ಪ್ರದೇಶ ಗೆದ್ದುಕೊಂಡ. ಈತನನ್ನು "ಭೋಸಾಜೀ" ಎಂದು ಕರೆಯುತ್ತಿದ್ದರು. ಈತನ ಹೆಸರಿನಿಂದಲೇ "ಭೋಸ್ಲೆ" ಕುಲನಾಮವಾಯಿತು. ಈ ಭೋಸ್ಲೆ ವಂಶದ ಶಿವಾಜಿಯ ಮುತ್ತಜ್ಜ ಬಾಬಾಜಿ. ಭೋಮಾ ನದಿತೀರದ ಪಾಂಡೇಪೇಡಗಾಂಮ್ ಎಂಬ ಗ್ರಾಮದ ಜಹಗೀರದಾರನಾಗಿದ್ದ. ಈತನಿಗೆ ಮಾಲೋಜೀ ಹಾಗೂ ವಿಠೋಜೀ ಎಂಬ ಮಕ್ಕಳಿದ್ದರು. ಇವರು ಅಹಮ್ಮದಾನಗರದ ನಿಜಾಮ್‍ಶಾಹಿ ಆಡಳಿತದಲ್ಲಿ ಕೆಲಸಕ್ಕೆ ಸೇರಿದ್ದು ಪ್ರತಿಷ್ಠಿತ ವ್ಯಕ್ತಿಗಳಾಗಿದ್ದರು. ಮಾಲೋಜೀಗೆ ಸುಮಾರು 1594ರಲ್ಲಿ ಶಹಾಜಿ ಜನಿಸಿದ. ಶಹಾಜಿಯನ್ನು ಕುರಿತ ಮೊದಲ ಉಲ್ಲೇಖ 1628ರಲ್ಲಿ ದಾಖಲೆಯೊಂದರಲ್ಲಿ ಸದ್ಯ ದೊರೆತಿದೆ. ಆ ಸಮಯಕ್ಕಾಗಲೇ ಶಹಾಜಿ ನಿಜಾಮ್‍ಶಾಹನ ಆಡಳಿತದಲ್ಲಿ ಒಬ್ಬ ಅಧಿಕಾರಿಯಾಗಿದ್ದ. ಶರಪೋಜಿ ಶಹಾಜಿಯ ಸೋದರ, ತಾಯಿ ಉಮಾಬಾಯಿ. ಶಹಾಜಿ ಸುಮಾರು ಹದಿಮೂರು ವರ್ಷದವನಿದ್ದಾಗಲೆ ಆತನ ತಂದೆ ನಿಜಾಮ್‍ಶಾಹಿ ಹಾಗೂ ಆದಿಲ್‍ಶಾಹಿಗಳ ಯುದ್ದದಲ್ಲಿ ಮರಣಹೊಂದಿದ ಕಾರಣ ತಾಯಿ ಉಮಾಬಾಯಿಯೇ ಮಕ್ಕಳ ಪಾಲನೆ ಪೋಷಣೆ ಮಾಡಿದಳು. ನಿಜಾಮ್‍ಶಹಾನ ಇನ್ನೊಬ್ಬ ಅಧಿಕಾರಿ ಲಖುಜೀ ಜಾಧವನ ಮಗಳು ಜೀಜಾಬಾಯಿಯೊಂದಿಗೆ ಶಹಾಜಿಯ ಲಗ್ನವಾಯಿತು. 1630ರಲ್ಲಿ ಲಖುಜೀಯ ಕೊಲೆಯಾದಾಗ ಶಹಾಜಿ ಬಿಜಾಪುರ ಆದಿಲ್‍ಶಾಹಿ ಅರಸರಲ್ಲಿ ಕೆಲಸ ಕೇಳಿಕೊಂಡು ಹೋದ. ಆದಿಲ್‍ಶಾಹ ಇವನನ್ನು ಸ್ವಾಗತಿಸಿ ಸೈನ್ಯಾಧಿಕಾರಿಯಾಗಿ ನೇಮಿಸಿದ. ಮುಂದೆ ಶಾಹ ಈತನಿಗೆ ಮಹಾರಾಷ್ಟ್ರದ ಜಹಗೀರಿಯನ್ನು ಬಿಟ್ಟುದಲ್ಲದೆ ಶಹಾಜಿಯನ್ನು ಕರ್ನಾಟಕದಲ್ಲಿ ಆಡಳಿತ ವ್ಯವಸ್ಥೆಗೆ ನೇಮಿಸಿದ ಕೂಡ. ಆಗ ಶಹಾಜಿ ವಿಶ್ವಾಸಿ ಸೇವಕ ದಾದಾಜೀಕೊಂಡದೇವನಿಗೆ ತನ್ನ ಜಹಗೀರಿಯ ಆಡಳಿತವನ್ನು ವಹಿಸಿಕೊಟ್ಟಿದ್ದ. ಶಹಾಜಿಗೆ ಜೀಜಾಬಾಯಿ ಹಾಗೂ ತುಕಾಬಾಯಿ ಹೆಂಡತಿಯರು. ಜೀಜಾಬಾಯಿಗೆ  ಶಂಭೂಜೀ (ಸಂಭಾಜೀ) ಹಾಗು ಶಿವಾಜಿ ಎಂಬ ಇಬ್ಬರು ಮಕ್ಕಳು. ತುಕಾಬಾಯಿಗೆ ಶಾಂತಜೀ ಹಾಗೂ ವೆಂಕೋಜಿ (ಏಕೋಜೀ) ಎಂಬ ಮಕ್ಕಳೂ ಇದ್ದರು. ಶಹಾಜಿ ಕರ್ನಾಟಕದ ಅನೇಕ ಪಾಳೆಯಗಾರರನ್ನು ಗೆದ್ದು ಬೆಂಗಳೂರಿನಲ್ಲಿ ನೆಲಸಿದ. 

	ಶಹಾಜಿಯ ಬೆಳೆವಣಿಗೆ ಆದಿಲ್‍ಶಾಹಿ ದೊರೆಗೆ ಚಿಂತೆಯುಂಟುಮಾಡಿತು. ಅತ್ತ ಶಿವಾಜಿ ಕೂಡ ದಿನೇ ದಿನೇ ಪ್ರವರ್ಧಮಾನನಾಗಿ ಅಲ್ಲಲ್ಲಿ ಯುದ್ಧಗಳನ್ನು ಮಾಡುತ್ತಿದ್ದುದನ್ನು ಕಂಡು ಆದಿಲ್‍ಷಾಹಿ ದೊರೆ ಮೋಸದಿಂದ ಶಹಾಜಿಯನ್ನು ಹಿಡಿಸಿ ಬಿಜಾಪುರದಲ್ಲಿ ಸೆರೆಯಲ್ಲಿಟ್ಟ. ಮೊಗಲ್ ಚಕ್ರವರ್ತಿ ಷಹಜಹಾನ್ ಮತ್ತು ಶಹಾಜಿಯ ಮಕ್ಕಳು ಸಂಭಾಜೀ ಮತ್ತು ಶಿವಾಜಿ ಇವರ ಪ್ರಯತ್ನದ ಫಲವಾಗಿ ನಾಲ್ಕು ವರ್ಷ ಸೆರೆವಾಸದಿಂದ ಶಹಾಜಿಯ ಬಿಡುಗಡೆಯಾಯಿತು. ಮುಂದೆ 1664ರಲ್ಲಿ ದೊದ್ದಿಗೇರಿಯಲ್ಲಿ ಶಹಾಜಿ ಮರಣಹೊಂದಿದುದಾಗಿ ತಿಳಿದುಬಂದಿದೆ. ಶಹಾಜಿಯ ಪುತ್ರ ಸಂಭಾಜಿ ಕರ್ನಾಟಕದಲ್ಲಿ ತಂದೆಯೊಂದಿಗೆ ಬೆಂಗಳೂರು ಹಾಗೂ ಕೋಲಾರ ಪ್ರದೇಶದಲ್ಲಿ ನೆಲಸಿದ. ಸಂಭಾಜಿಯ ಇಬ್ಬರು ಮಕ್ಕಳು ಮಲಕೋಜಿ ಹಾಗೂ ಕನ್ನರಾಯ ಇವರು ಕರ್ನಾಟಕದಲ್ಲಿ ಶಿವಾಜಿಯ ಸಾಮಂತರಾಗಿ ರಾಜ್ಯ ಆಳಿದರು. ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಎಂದರೆ ಸುಮಾರು ನರ್ಮದಾ ನದಿಯಿಂದ (ಗ್ವಾಲೇರ್) ಕಾವೇರಿ (ತಂಜಾವೂರ್) ಪ್ರದೇಶದವರೆಗೆ ಶಿವಾಜಿ ತನ್ನ ರಾಜ್ಯವನ್ನು ವಿಸ್ತರಿಸಿದ. ಶಿವಾಜಿ ತನ್ನ ತಂದೆ ಶಹಾಜಿಯ ರಾಜಧಾನಿಯಾಗಿದ್ದ ಬೆಂಗಳೂರಿನಲ್ಲಿ ಸಾಯಿಬಾಯ ನಿಂಬಾಳ್ಕರ್ ಎಂಬಾಕೆಯನ್ನು ಮದುವೆಯಾದ. ಈಕೆಯ ಪುತ್ರನೇ ಸಂಭಾಜಿ II ಶಿವಾಜಿಯ ಇನ್ನೊಬ್ಬ ಪತ್ನಿ ಸೊಯ್ರಾಬಾಯಿಯಲ್ಲಿ ರಾಜರಾಮ ಹುಟ್ಟಿದ ಶಿವಾಜಿ ತನ್ನ ಅಂತ್ಯಕಾಲದಲ್ಲಿ ಮೂಲರಾಜ್ಯವನ್ನು (ಮಹಾರಾಷ್ಟ್ರ ಪ್ರದೇಶ) ರಾಜರಾಮನಿಗೂ ತುಂಗಭದ್ರೆಯ ಈಚೆಗಿನ ಪ್ರದೇಶವನ್ನು ಸಂಭಾಜಿಗೂ ಹಂಚಿಕೊಟ್ಟ. ಇದರಿಂದ ಅಂತಃಕಲಹ, ಅತೃಪ್ತಿಗಳುಂಟಾದವು. ಕರ್ನಾಟಕ ಪ್ರದೇಶದ ಒಡೆಯನಾದ ಸಂಭಾಜಿ 1666ಕ್ಕೂ ಮುಂಚೆಯೆ ಜಯಿತಾಬಾಯಿಯನ್ನು ಮದುವೆಯಾಗಿದ್ದ. ಈಕೆ 1693ರಲ್ಲಿ ತೀರಿಹೋದವಳೆಂದು ತಿಳಿದುಬರುತ್ತದೆ. ಸಂಭಾಜಿ, ರಾಜರಾಮ, ಶಾಹು ಇವರ ವಂಶಸ್ಥರು ಮಹಾರಾಷ್ಟ್ರದಲ್ಲಿ ನಿಂತು ರಾಜ್ಯವಾಳಿದರು. ರಾಜರಾಮನಿಗೆ ಸಾತಾರಾ ರಾಜಧಾನಿಯಾಗಿತ್ತು. ಅವನ ಮರಣಾನಂತರ ಅಂತಃಕಲಹಗಳಲ್ಲಿ ಈ ಮನೆತನ ನಿಃಸತ್ವವಾಯಿತು. ಹಲವರಲ್ಲಿ ಹರಿದು ಹಂಚಿ ಹೋಯಿತು. ರಾಜರಾಮನ ಹೆಂಡತಿ ತಾರಾಬಾಯಿ ಕೊಲ್ಹಾಪುರದಲ್ಲಿ ನಿಂತುದರಿಂದ ಅದಕ್ಕೆ ಪ್ರಾಮುಖ್ಯ ಬಂತು. 1714ರಿಂದ 1760ರ ಮಧ್ಯೆ ರಾಜ್ಯವಾಳಿದ ಸಂಭಾಜಿ ಕಾಲದಿಂದ ಇದು ಭೋಸ್ಲೆ ಮನೆತನಕ್ಕೆ ರಾಜಧಾನಿಯಾಯಿತು. ರಾಜ್ಯಸೂತ್ರಗಳು ವಾಸ್ತವದಲ್ಲಿ ಪೇಶ್ವೆಗಳ ಕೈಯಲ್ಲಿತ್ತು. ಅಂತೆಯೆ ಕೊಲ್ಹಾಪುರದ ಭೋಸ್ಲೆಗಳು ಮತ್ತು ಸಾತಾರದ ಭೋಸ್ಲೆಗಳು ಒಂದಾಗಿ ಪೇಶ್ವೆಗಳ ವಿರುದ್ಧ ಬಂಡೆದ್ದರು. ಆದರೆ ಪೇಶ್ವೆ ಸೇನಾಪತಿ ಪಟವರ್ಧನ ಆ ಬಂಡನ್ನು ಮುರಿದ. ಇಂಗ್ಲಿಷರ ಮತ್ತು ಪೇಶ್ವೆಯವರ ನೇತೃತ್ವದಲ್ಲಿ ನಡೆದ ಮರಾಠಾ ಯುದ್ಧದಲ್ಲಿ ಕೊಲ್ಹಾಪುರದ ಭೋಸ್ಲೆ ಮನೆತನದ ರಾಜರು ತಟಸ್ಥನೀತಿ ಅನುಸರಿಸಿದರು. 1812ರಲ್ಲಿ ಅವರು ಇಂಗ್ಲಿಷರಿಗೆ ಮಾಂಡಲಿಕರಾಗಿರಲು ಒಪ್ಪಿಕೊಂಡರು. 1821ರಲ್ಲಿ ಇಂಗ್ಲಿಷರು ಭೋಸ್ಲೆಯವರಿಗೆ ಸೇರಿದ್ದ ಸಮುದ್ರದಂಡೆಯ ಪ್ರದೇಶಗಳನ್ನೆಲ್ಲ ಕಿತ್ತುಕೊಂಡು ಕೇವಲ ಕೊಲ್ಹಾಪುರ್ ಸಂಸ್ಥಾನ ಮಾತ್ರ ಉಳಿಸಿದರು. ಅಂತೆಯೆ ಇದಕ್ಕೆ ಕೊಲ್ಹಾಪುರ್ ಮನೆತನವೆಂದೂ ಹೆಸರು.
ತಂಜಾವೂರ್ ಭೋಸ್ಲೆ : ಛತ್ರಪತಿ ಶಿವಾಜಿಯ ಬಲ ತಮ್ಮ ವೆಂಕೋಜೀ (ಏಕೋಜಿ) ತಂಜಾವೂರನ್ನು ಆಳುತ್ತಿದ್ದು ಅದಕ್ಕೆ ತಂಜಾವೂರು ಭೋಸ್ಲೆಮನೆತನವೆಂದು ಹೆಸರಾಯಿತು. ಈತ ಆದಿಲ್ ಶಾಹಿಯ ಆಡಳಿತ ಒಪ್ಪಿಕೊಂಡು ಜಿಂಜಿಯ ಜಹಗೀರನ್ನು ಶಹಾಜಿಯ ಅನಂತರ ತಾನೇ ವಹಿಸಿಕೊಂಡಿದ್ದ. ಮಧುರೆಯ ನಾಯಕರು ಅಂತಃಕಲಹದಲ್ಲಿ ತೊಡಗಿ ವಿಜಯರಾಘವನಾಯಕನ ತಲೆ ಕತ್ತರಿಸಲು (1674 ಏಪ್ರಿಲ್) ಅವನ ಪುತ್ರ ಬಿಜಾಪುರದ ಆದಿಲ್‍ಶಾಹನನ್ನು ಸಹಾಯ ಬೇಡಿದ. ಆದಿಲ್‍ಶಾಹ ವೆಂಕೋಜೀಗೆ ತಂಜಾವೂರನ್ನು ಹಿಡಿಯಲು ಹೇಳಿ, ವೆಂಕೋಜಿ 12-1-1676 ರಂದು ತಂಜಾವೂರನ್ನು ಗೆದ್ದು ಅದರ ಸಿಂಹಾಸನವನ್ನೇ ಆಕ್ರಮಿಸಿಕೊಂಡ. 1678ರಲ್ಲಿ ಶಿವಾಜಿ ಕರ್ನಾಟಕವನ್ನು ಗೆದ್ದುಕೊಂಡು ಜಿಂಜಿ ತಂಜಾವೂರುಗಳಿಗೆ ಬಂದು ವೆಂಕೋಜಿಯ ಜೊತೆಗೆ ತಂದೆಯ ಆಸ್ತಿಯಲ್ಲಿ ಹಂಚಿಕೆ ಸರಿಯಾಗಿ ಆಗಿಲ್ಲವೆಂದು ಜಗಳ ಕಾದ. ಅಣ್ಣ ತಮ್ಮಂದಿರಲ್ಲಿ ಯುದ್ಧಗಳಾಗಿ ಜಿಂಜಿಗೆ ಒಡೆಯನಾಗಿ ಶಾಂತಜೀ ಭೋಸ್ಲೆ ಎಂಬ ಇನ್ನೊಬ್ಬ ತಮ್ಮನನ್ನು ಶಿವಾಜಿ ನೇಮಿಸಿದ. ವೆಂಕೋಜಿ ಒಳ್ಳೆಯ ಆಡಳಿತಗಾರನಾಗಿದ್ದ. ತಮಿಳು ಕೃತಿ ಭೋಸಲ್ ವಂಶಮ್, ಹಾಗೂ ಜೇಸುಯಿಟ್‍ಮಿಶನ್ನಿನ ಆಂಡ್ರೆಫೇರ್ ಟಿಪ್ಪಣಿಗಳಿಂದ ಈ ಬಗೆಗೆ ಗಮನಾರ್ಹ ಅಂಶಗಳು ತಿಳಿದುಬರುತ್ತವೆ. ವೆಂಕೋಜಿಯ ಅನಂತರ ಆತನ ಪುತ್ರ ಶಹಾಜೀ ಪಟ್ಟಕ್ಕೆ ಬಂದ. ಇವನು ಸುತ್ತಮುತ್ತಣ ಕೆಲಪಾಳೆಯಗಾರರನ್ನು ಗೆದ್ದು ರಾಜ್ಯವನ್ನು ಇನ್ನಷ್ಟು ವಿಸ್ತರಿಸಿದ. ಇವನು ಮಕ್ಕಳಿಲ್ಲದೆ ಸಾಯಲು ಇವನ ತಮ್ಮಂದಿರು ಸರ್‍ಫೋಜಿ ಹಾಗೂ ತುಕೋಜಿ ರಾಜ್ಯವಾಳಿದರು. ತುಕೋಜಿ ಬಹಳ ಒಳ್ಳೆಯ ರಾಜಕಾರಣಿಯೂ ವಿದ್ಯಾಭಿಲಾಷಿಯೂ ಆಗಿದ್ದ. ಅನೇಕ ಭಾಷೆಗಳಲ್ಲಿ ಪಾರಂಗತನಾಗಿದ್ದ. ಆತನ ಪುತ್ರ ಏಕೋಜೀ ಒಂದೇ ವರ್ಷ ರಾಜ್ಯವಾಳಿ ಅಕಾಲ ಮರಣಕ್ಕೆ ತುತ್ತಾದ. ರಾಜಾ ಸಯ್ಯಾಜಿಯ ಕಾಲದಲ್ಲಿ ತುಕೋಜಿಯ ದಾಸೀಪುತ್ರ ಪ್ರತಾಪಸಿಂಹ ಸಯ್ಯಾಜಿಯನ್ನು ತಳ್ಳಿ ಪಟ್ಟಕ್ಕೆ ಬಂದ. ಅವನು ಛತ್ರಪತಿ ಶಾಹುವಿನೊಂದಿಗೆ ಸ್ನೇಹ ಹೊಂದಿದ್ದ. ಆತನ ಸಹಾಯದಿಂದ ರಾಜ್ಯಭಾರ ನಡೆಸಿದ. ಆರ್ಕಾಟದ ನವಾಬರೊಂದಿಗೆ ಯುದ್ಧಗಳಾದುವು. ಇನ್ನೊಂದೆಡೆ ಇಂಗ್ಲಿಷರು ದೇವಿಕೋಟಾರೇವನ್ನೂ ಅದರ ಆಸುಪಾಸಿನ ಪ್ರದೇಶವನ್ನೂ ತಮ್ಮ ವಶಕ್ಕೆ ತೆಗೆದುಕೊಂಡರು. ಇಂಗ್ಲಿಷರು, ಫ್ರೆಂಚರು ಮತ್ತು ಆರ್ಕಾಟಿನ ನವಾಬರು ಈ ರಾಜ್ಯವನ್ನು ನಾಶಮಾಡಲು ಬಹಳ ಪ್ರಯತ್ನಪಟ್ಟರು. ಆದರೆ ಸೇನಾಪತಿ ಮಾನಾಜೀಜಗತಾಪ ಪರಾಕ್ರಮದಿಂದ ಹೋರಾಡಿ ರಾಜ್ಯವನ್ನು ರಕ್ಷಿಸಿದ. ಪ್ರತಾಪಸಿಂಹನ ಮರಣಾನಂತರ ಅವನ ಮಗ ತುಳರಾಜ ಇಂಗ್ಲಿಷರ ಮಾಂಡಲಿಕನಾದ. ಇವನು ಮಕ್ಕಳಿಲ್ಲದೆ ಸತ್ತ. ಮುಂಗೀಕರ್ ಭೋಸ್ಲೆ ಪೈಕಿ ಮಗುವೊಂದನ್ನು ದತ್ತು ತಂದು ಅವನಿಗೆ "ಸರ್‍ಫೊಜಿ" ಎಂದು ಹೆಸರಿಟ್ಟು ಸಿಂಹಾಸನದ ಮೇಲೆ ಕೂಡಿಸಿದರು. ಡಾಲ್‍ಹೌಸಿ ಸಂಸ್ಥಾನವನ್ನು ಆಳಲು ಔರಸರಿಲ್ಲವೆಂಬ ಕಾರಣದಿಂದ ಅದನ್ನು ಆಕ್ರಮಿಸಿಕೊಂಡನಾದ ಕಾರಣ 1855ರಲ್ಲಿ ತಂಜಾವೂರ ಮನೆತನದ ಇತಿಹಾಸ ಕೊನೆಗೊಂಡಿತು.

ನಾಗಪೂರ್ ಭೋಸ್ಲೆ : ಪರಸೋಜಿ ಭೋಸ್ಲೆಯಿಂದ ಈ ಮನೆತನದ ಆರಂಭ. ಔರಂಗಜೇಬನ ಸೆರೆಯಿಂದ ಛತ್ರಪತಿ ಸಾಹು ಬಿಡಿಸಿಕೊಂಡುಬರುವಲ್ಲಿ ಈತ ತುಂಬ ಸಹಾಯ ಮಾಡಿದ. ಪರಸೋಜಿ ಶಿವಾಜಿಯ ಕಾಲದಿಂದಲೂ ಸೈನ್ಯದಲ್ಲಿ ಅಧಿಕಾರಿಯಾಗಿದ್ದ. ರಾಜರಾಮ ಇವರಿಗೆ "ಸೇನಾಸಾಹೇಬ್‍ಸುಭಾ" ಎಂಬ ಬಿರುದನ್ನಿತ್ತಿದ್ದ. ಪರಸೋಜಿ ವರ್ಹಾಡದ ಭಾಮಾ ಎಂಬ ಸ್ಥಳದಲ್ಲಿ ಸೇನೆಸಹಿತ ನೆಲೆನಿಂತ, ಪರಸೋಜಿಯ ಮರಣಾನಂತರ ಅವನ ಪುತ್ರ ಕಾನೋಜೀ ಸೇನಾ ಸಾಹೇಬ್‍ಸುಭಾಧಾರಿಯಾದ. ಈತ ಒರಿಸ್ಸಾವರೆಗೂ ರಾಜ್ಯ ವಿಸ್ತರಿಸಿದ. ಆದರೆ ಇವನಿಗೂ ಪೇಶ್ವೆ ಬಾಜೀರಾಯನಿಗೂ ಹೊಂದಾಣಿಕೆ ಇರಲಿಲ್ಲ. ಪೇಶ್ವೆಯ ಕಿರುಕುಳದಿಂದ ಬೇಸತ್ತ ಕಾನೋಜೀ ಮರಾಠರ ಪಕ್ಷಬಿಟ್ಟು ನಿಜಾಮನ ಕಡೆ ಹೋದ. ಆಗ ಕಾನೋಜೀಯನ್ನು ಶಾಹುಮಹಾರಾಜ ಸೆರೆ ಹಿಡಿಸಿ ರಾಜ್ಯವನ್ನು ಅವನ ಚಿಕ್ಕಪ್ಪನ ಮಗ ರಘೂಜೀಗೆ ಸೇನಾಸಾಹೇಬ್‍ಸುಭಾ ಬಿರುದು ಸಹಿತ ಕೊಟ್ಟ. ರಘೂಜಿ ಬಹಳ ಶೂರ ಹಾಗೂ ಧೈರ್ಯವಂತ. ಗೋಂಡಾವಾನವನ್ನು ಗೆದ್ದು 1743ರಲ್ಲಿ ನಾಗಪುರದಲ್ಲಿ ರಾಜಧಾನಿ ಸ್ಥಾಪಿಸಿದ. ಬಂಗಾಲದ ನವಾಬರನ್ನು ಸೋಲಿಸಿ ಅವರಿಂದ ವಿಶೇಷ ಕಪ್ಪ ಪಡೆದ ರಘೂಜೀಯ ಅನಂತರ ಅವನ ಪುತ್ರ ಜಾನೋಜೀ ಪಟ್ಟಕ್ಕೆ ಬಂದ. ಇವನಿಗೂ ಪೇಶ್ವೆಯವರಿಗೂ ಹೊಂದಾಣಿಕೆ ಇರಲಿಲ್ಲ. ಛತ್ರಪತಿ ಶಾಹುಮಹಾರಾಜ ಸತ್ತಕೂಡಲೆ ಪೇಶ್ವೆಯವರು ಜಾನೋಜಿಯ ಬಲತಮ್ಮನ ಪಕ್ಷವಹಿಸಿ ಭೋಸ್ಲೆ ರಾಜ್ಯವನ್ನು ಇಬ್ಭಾಗ ಮಾಡಿದರು ಮತ್ತು ನಾಗಪುರವನ್ನು ಕೊಳ್ಳೆ ಹೊಡೆದರು. 1772ರಲ್ಲಿ ಜಾನೋಜೀ ಮರಣ ಹೊಂದಿದ. ಈತ ಮುಂಧೋಜಿಯ ಪುತ್ರ ರಘೂಜೀಯನ್ನು ದತ್ತಕ ತೆಗೆದುಕೊಂಡ. ಇವನ ಕಾಲದಲ್ಲಿ ಇಂಗ್ಲಿಷರು ನಾಗಪುರವನ್ನು ಪ್ರವೇಶಿಸಿದರು. ಇವನು ಪೇಶ್ವೆಯವರಿಗೆ ಸಹಾಯ ಮಾಡಿದುದಲ್ಲದೆ ದೌಲತ್‍ರಾವ್ ಸಿಂಧೆ ಜೊತೆಗೆ ಸೇರಿ ಇಂಗ್ಲಿಷರೊಂದಿಗೆ ಯುದ್ಧ ಮಾಡಿದ. ಯುದ್ಧದಲ್ಲಿ ಸೋತ ಕಾರಣದಿಂದ ವರ್ಹಾಡದ ಬಹುಭಾಗ ಮತ್ತು ಒರಿಸ್ಸಾ ಪ್ರಾಂತವನ್ನು ಇಂಗ್ಲಿಷರಿಗೆ ಬಿಟ್ಟುಕೊಟ್ಟ. 1816ರಲ್ಲಿ ರಘೂಜೀ ಮರಣಹೊಂದಿದ. ಅವನ ಸೋದರನ ಮಗ ಮುಧೋಜೀ (ಅಪ್ಪಾಸಾಹೇಬ್) ಪಟ್ಟಕ್ಕೆ ಬಂದ. ಈತ ಇಂಗ್ಲಿಷರ ಸಹಾಯಕ ಸೈನ್ಯಪದ್ಧತಿಗೆ ಒಪ್ಪಿ ಅವರ ಸೈನ್ಯ ನಾಗಪುರದಲ್ಲಿರಲು ಅನುಮತಿ ನೀಡಿದ. ಮುಂದೆ ನಾಗಪುರ ರಾಜ್ಯ ಅವನತಿ ಹೊಂದಿತು.						
(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ